ಇಸ್ತಾನ್‍ಬುಲ್
ತುರ್ಕಿದೇಶದ ಒಂದು ಮುಖ್ಯ ಪಟ್ಟಣ. ಒಂದು ಪ್ರಮುಖ ರೇವುಪಟ್ಟಣ. ಮಾರ್ಮರಾ ಸಮುದ್ರತೀರದ ಬಾಸ ಪೊರಸ್ ಜಲಸಂಧಿಯ ದಕ್ಷಿಣ ತುದಿಯಲ್ಲಿದೆ. ರೋಮನ್ ಚಕ್ರಾಧಿಪತ್ಯದ ಕಾಲದಲ್ಲಿ ಅಂದರೆ ಕ್ರಿ.ಶ. 330ರಲ್ಲಿ, ಕಾನ್ ಸ್ಟ್ಯಾಂಟೈನ್ ಚಕ್ರವರ್ತಿಯಿಂದ ಹಿಂದೆ ಗ್ರೀಕ್ ಪ್ರದೇಶವಾಗಿದ್ದ ಬಿಜಾóಂಟಿಯಂನ ಈ ಭಾಗ ಕಾನ್ ಸ್ಟ್ಯಾಂಟಿನೋಪಲ್ ಎಂಬ ಹೆಸರನ್ನು ಪಡೆಯಿತು. (ಈ ಪಟ್ಟಣದ ಚರಿತ್ರೆಯ ವಿವರಗಳಿಗೆ - (ನೋಡಿ- ಕಾನ್‍ಸ್ಟಾಂಟಿನೋಪಲ್)). 1453ರಲ್ಲಿ ತುರ್ಕಿಯರ ಅಧೀನಕ್ಕೆ ಒಳಗಾದ ಮೇಲೆ ಆಟೋಮನ್ ಚಕ್ರಾಧಿಪತ್ಯದ ರಾಜಧಾನಿಯಾಗಿ ಇಸ್ತಾನ್ ಬುಲ್ ಎಂದಾಯಿತು. 1922ರಲ್ಲಿ ಈ ಪಟ್ಟಣದಿಂದ ರಾಜಧಾನಿಯನ್ನು ಅಂಕಾರಾಕ್ಕೆ ವರ್ಗಾಯಿಸಲಾಯಿತು. ಇಸ್ತಾನ್ ಬುಲ್ ಇಂದು 12 ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿದ ದೊಡ್ಡ ನಗರ. ಇಂದಿಗೂ ಇದು ಮುಖ್ಯ ವ್ಯಾಪಾರ ಕೇಂದ್ರವಾಗಿ ಉಪಯುಕ್ತ ರೇವುಪಟ್ಟಣವಾಗಿ ಉಳಿದಿದೆ. ಇಲ್ಲೊಂದು ವಿಶ್ವವಿದ್ಯಾನಿಲಯವಿದೆ(ಸ್ಥಾಪನೆ 1453. ಪುನರ್ ವ್ಯವಸ್ಥೆ 1933). ಊರಿನ ಐರೋಪ್ಯ ಭಾಗ ಗೋಲ್ಡನ್ ಹಾರನ್ನಿನ ಏಳು ಬೆಟ್ಟಗಳ ಮೇಲಿದೆ. ಮಧ್ಯ ಯುಗದ ಕೋಟೆ ಕೊತ್ತಳಗಳ ಪಳೆಯುಳಿಕೆಗಳನ್ನು ಅಲ್ಲಿ ಈಗಲೂ ಕಾಣಬಹುದು. ಇದಲ್ಲದೆ ಊರಿನ ಕೆಲಭಾಗಗಳು ಗ್ರೀಸ್ ಮತ್ತು ಏಷ್ಯಗಳ ಸಂಪರ್ಕವನ್ನು ಈಗಲೂ ಪ್ರದರ್ಶಿಸುತ್ತಿದೆ. ಬಿಜಾಂಟೈನ್ ಸಂಸ್ಕøತಿಯ ಪ್ರಸಿದ್ಧ ಸ್ಮಾರಕವಾಗಿ ಈಗ ಉಳಿದಿರುವುದೆಂದರೆ ಹಾಜಿಯ ಸೋಫಿಯ. ಹಿಂದೆ ಚರ್ಚಾಗಿದ್ದ ಈ ಭವ್ಯಮಂದಿರ ಈಗ ಕಲಾವಸ್ತುಗಳ ಪ್ರದರ್ಶನಶಾಲೆಯಾಗಿದೆ. ತುರ್ಕಿ ಕಲೆಗೆ ನಿದರ್ಶನಗಳಾಗಿ ಈಗ 16ನೆಯ ಶತಮಾನದ ಅನೇಕ ಮಸೀದಿಗಳು ಉಳಿದು ಬಂದಿವೆ. ಜೊತೆಗೆ 19, 20ನೆಯ ಶತಮಾನದ ಸುಲ್ತಾನರ ಅರಮನೆಗಳು ರಮಣೀಯವಾಗಿವೆ.
(ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ